ಪೆಲಾರ್ಗೋನೀಯಮ್ - 
ರೇನಿಯೇಸೀ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ಮೂಲಿಕೆ ಅಥವಾ ಪೊದೆ, ಇದಕ್ಕೆ ಜಿರೇನಿಯಮ್ ಎಂಬ ಸಾಮಾನ್ಯ ಬಳಕೆಯ ಹೆಸರುಂಟು. ಇದರ ತವರು ದಕ್ಷಿಣ ಆಫ್ರಿಕ.  ಸುಮಾರು 300 ವರ್ಷಗಳಿಂದಲೂ ಪ್ರಪಂಚದಾದ್ಯಂತ ತೋಟಗಾರಿಕೆಯಲ್ಲಿ ಹೆಚ್ಚಿನ ಪ್ರಾಮುಖ್ಯ ಗಳಿಸಿದೆ.  ಸುಂದರವಾದ ವಿವಿಧ ಬಣ್ಣದ ಹೂ ಮತ್ತು ಎಲೆಗಳಿರುವ ಅಲಂಕಾರ ಸಸ್ಯವಿದು.  ಇದನ್ನು ಕುಂಡ, ಲತಾಗೃಹ, ಉದ್ಯಾನವನ, ಮಡಿ ಮತ್ತು ಅಂಚುಗಳಲ್ಲಿ ಬೆಳೆಸುತ್ತಾರೆ.  ಇದರಲ್ಲಿ ಲತೆಯಂತೆ ಹಬ್ಬು ಬಳ್ಳಿ ರೂಪದ ಪ್ರಭೇದಗಳೂ ಉಂಟು.  ಇವನ್ನು ತೂಗು ಬುಟ್ಟಿಗಳಲ್ಲಿಯೂ ಬೆಳೆಸುವುದಿದೆ.  ಹೂಗಳನ್ನು ಮುಡಿದುಕೊಳ್ಳಲು ಮತ್ತು ಗೋಡೆ ಕಟ್ಟಲು ಬಳಸುತ್ತಾರೆ.  ಅಲ್ಲದೆ, ಮೇಜಿನ ಅಲಂಕಾರಕ್ಕೋಸ್ಕರವಾಗಿ ಬಳಸುವುದುಂಟು.  ಈ ಪೊದೆಯ ಸುವಾಸಿತ ಎಲೆಗಳನ್ನು ರುಚಿಕರವಾದ ತಿಂಡಿಗಳಿಗೆ ಪರಿಮಳ ಕಟ್ಟಲು ಉಪಯೋಗಿಸಬಹುದು.  
ಇವೆಲ್ಲಕ್ಕಿಂತ ಮಿಗಿಲಾಗಿ ಇದೆ ಎಣ್ಣೆಯನ್ನು (ಜಿರೆನಿಯಮ್ ಆಯಿಲ್) ಸೋಪಿನ ತಯಾರಿಕೆಯಲ್ಲೂ ಕಾಂತಿವರ್ಧಕಗಳ ತಯಾರಿಕೆಯಲ್ಲೂ ವಿಶೇಷವಾಗಿ ಬಳಸಲಾಗುತ್ತಿದೆ.  ಜಿರೇನಿಯಮ್ ಎಣ್ಣೆಯನ್ನು ತಯರಿಸಲು ಕೆಲವು ಪ್ರಭೇದಗಳು ಮಾತ್ರ ಉಪಯುಕ್ತ.

ಪೆಲಾರ್ಗೋನೀಯಮಿನಲ್ಲಿ ಸುಮಾರು 260 ಪ್ರಭೇದಗಳಿವೆ.  ಕೆಲವು ಕೇವಲ 20 ಸೆಂ.ಮೀ. ಎತ್ತರಕ್ಕೆ ಬೆಳೆಯುವುವಾದರೆ ಇನ್ನು ಕೆಲವು 60 ಸೆಂ.ಮೀ. ಎತ್ತರಕ್ಕೆ ಬೆಳೆಯುವುವು.  ಎಲೆಗಳು ಚಕ್ರಾಕಾರದವು ಎಲ್ಲವೆ, ಮೂತ್ರಪಿಂಡದಾಕರದವು; ಸರಳವಾಗಿವೆ.  ಪರ್ಯಾಯ ಅಥವಾ ಅಭಿಮುಖ ರೀತಿಯಲ್ಲಿ ಜೋಡಣೆಗೊಂಡಿರುವುವು.  ಹೂಗಳ ಬಣ್ಣ ಕೆಂಪು, ಕಡುಗೆಂಪು, ರಕ್ತಕೆಂಪು, ಕೆನ್ನೀಲಿ - ಹೀಗೆ ವೈವಿಧ್ಯಮಯ.  ಪ್ರತಿ ಹೂವಿನಲ್ಲೂ 5 ಪುಷ್ಪಪತ್ರಗಳೂ 5 ದಳಗಳೂ 10 ಕೇಸರಗಳೂ 5 ಕಾರ್ಪೆಲುಗಳ ಅಂಡಾಶಯವೂ ಇವೆ.
ಭಾರತದಲ್ಲಿ ಬೆಳೆಯುವ ಪೆಲಾರ್ಗೋನೀಯಮುಗಳ ಪೈಕಿ ಅತಿ ಮುಖ್ಯವಾದವು ಇಂತಿವೆ; ಪೆ.ಜೊನೇಲ್ ಹಾಗೂ ಪೆ.ಇನ್‍ಕ್ವಿನಾನ್ಸ್ (ಜೋನೆಲ್ ಜಿರೇನಿಯಮ್) ಪೆ.ಪೆಲ್ಸೇಟಮ್ ಹಾಗೂ ಪೆ.ಲ್ಯಾಟರಿಪೆಸ್ (ಐವಿ-ಲೀವ್ಡ್ ಜಿರೇನಿಯಮ್) ಪೆ.ಕ್ಯಾಪಿಟೇಟಮ್, ಪೆ.ಗ್ರ್ಯಾವಿಯೊಲೆನ್ಸ್, ಪೆ.ಓಡರೆ ಟಸಿಮಮ್ ಹಾಗೂ ಪೆ.ರ್ಯಾಡ್ಯುಲ ಮತ್ತು ಪೆ.ಕ್ವರ್ಸಿಪೋಲಿಯಮ್ (ಸೆಂಟೆಡ್ ಜಿರೇನಿಯಮ್).
ಪೆಲಾರ್ಗೋನೀಯಮನ್ನು ಬೀಜಗಳಿಂದ ಮತ್ತು ಕಾಂಡತುಂಡುಗಳಿಂದ ವೃದ್ಧಿ ಮಾಡಬಹುದು.  ಎರಡನೆಯ ಕ್ರಮ ಸುಲಭ ಹಾಗೂ ಲಾಭದಾಯಕ.  ಇದರ ಬೇಸಾಯಕ್ಕೆ ಫಲವತ್ತಾದ, ಚೆನ್ನಾಗಿ ನೀರು ಬಸಿದು ಹೋಗುವಂಥ ಮಣ್ಣು ಉತ್ತಮ.  ಬೆಟ್ಟ ಪ್ರದೇಶಗಳಲ್ಲಿ ಹುಲುಸಾಗಿ ಬೆಳೆಯುತ್ತದೆ.  ಮೈದಾನ ಸೀಮೆಗಳಲ್ಲಿ ಅದರಲ್ಲೂ ತಾಪ ಹೆಚ್ಚಾಗಿರುವ ಇಲ್ಲವೆ ಮಳೆ ಅತಿಯಾಗಿರುವ ಪ್ರದೇಶಗಳಲ್ಲಿ ಇದನ್ನು ಬೆಳೆಸುವುದು ಕಠಿಣ.
ಜಿರೇನಿಯಮ್ ಎಣ್ಣೆಯನ್ನು ಪಡೆಯುವ ದೃಷ್ಟಿಯಿಂದ ಪ್ರಮುಖ ಎನಿಸಿರುವ ಪ್ರಭೇದಗಳು ಇವು; ಪೆ.ಕ್ಯಾಪಿಟೇಟಮ್, ಪೆ.ಫ್ರೌಗ್ರೆನ್, ಪೆ.ಗ್ರ್ಯಾವಿಯೋ ಲೆನ್ಸ್, ಪೆ.ರ್ಯಾಡುಲ, ಪೆ.ಓಡಮೇಟಿಸಿಮ.  ಇವುಗಳ ಪೈಕಿ ವಾಣಿಜ್ಯದೃಷ್ಟಿಯಿಂದ ಅತ್ಯಂತ ಮುಖ್ಯವಾದ್ದು ಗ್ರ್ಯಾವಿಯೋಲೆನ್ಸ್ ಪ್ರಭೇದ.  ಇದು ಮೂಲತಃ ದಕ್ಷಿಣ ಆಫ್ರಿಕದ್ದು.  ಭಾರತದಲ್ಲಿ ಆಲ್ಜೀರಿಯನ್ ಅಥವಾ ಟ್ಯೂನಿಸಿಯನ್ ಮತ್ತು ಬೋರ್ಬಾನ್ ಅಥವಾ ರೀಯೂನಿಯನ್ ಎಂಬ ಎರಡು ಬಗೆಗಳನ್ನು ಬೆಳೆಸಲಾಗುತ್ತಿದೆ.  ನೀಲಗಿರಿ, ಎರಕಾಡು ಮತ್ತು ಆನೆಮಲೈ ಬೆಟ್ಟಗಳು ಇದರ ಬೆಳೆಗೆ ಯುಕ್ತ ಹಾಗೂ ಪ್ರಸಿದ್ಧ.  ಗಿಡಗಳನ್ನು ನೆಟ್ಟ 8-10 ತಿಂಗಳ ಅನಂತರ ಅಂದರೆ ಎಲೆಗಳೆಲ್ಲ ಹಳದಿ ಬಣ್ಣಕ್ಕೆ ತಿರುಗಿ ನಿಂಬೆಯ ವಾಸನೆಯಿಂದ ಗುಲಾಬಿಯ ವಾಸನೆಗೆ ತಿರುಗಿದಾಗ ಕೊಯ್ಲು ಮಾಡಲಾಗುತ್ತದೆ.  ಎಳೆಯ ಕುಡಿಗಳನ್ನು ವರ್ಷದಲ್ಲಿ ಮೂರು ಬಾರಿ ಅಂದರೆ ಜುಲೈ-ಆಗಸ್ಟ್, ಅಕ್ಟೋಬರ್ ಮತ್ತು ಜನವರಿ ತಿಂಗಳುಗಳಲ್ಲಿ ಕೊಯ್ಲು ಮಾಡಬಹುದು.  ಬೆಳಗಿನ ವೇಳೆ ಕೊಯ್ಲು ಮಾಡಿ ಎಲೆಗಳನ್ನು 8-12 ಗಂಟೆಗಳ ತನಕ ಅಲ್ಲಿಯೇ ಬಿಟ್ಟು ಅನಂತರ ಬಟ್ಟಿ ಇಳಿಸಿ ಎಣ್ಣೆಯನ್ನು ತೆಗೆಯಲಾಗುತ್ತದೆ.  ಎಣ್ಣೆ ತೆಗೆಯಲು ವಿವಿಧ ಕಾಲಗಳಲ್ಲಿ ಸಿಗುವ ಎಲೆಯ ಸರಾಸರಿ ಇಳುವರಿ ಈ ರೀತಿ ಇದೆ. 
ಜುಲೈ-ಆಗಸ್ಟ್	:	4.050 ಕೆ.ಜಿ./ಹೆಕ್ಟೇರ್
ಅಕ್ಟೋಬರ್	:	675 ಕೆ.ಜಿ./ಹೆಕ್ಟೇರ್
ಜನವರಿ-ಮಾರ್ಚ್:		2.025 ಕೆ.ಜಿ./ಹೆಕ್ಟೇರ್
ಪೆಲರ್ಗೋನೀಯಮ್ ಸಸ್ಯಗಳು ಬಲಿತ ತರುವಾಯ 3-6 ವರ್ಷಗಳ ತನಕ ಉತ್ಪನ್ನಕಾರಕವಾಗಿರುತ್ತವೆ.  ಎಣ್ಣೆಯ ಇಳುವರಿ ಮುಖ್ಯವಾಗಿ ಹವಾಗುಣ, ಮಣ್ಣು, ಸಸ್ಯದ ವಯಸ್ಸು ಮತ್ತು ಬೇಸಾಯ ಮಾಡುವ ಭೂಮಿಯ ಎತ್ತರ ಇವನ್ನು ಅವಲಂಬಿಸಿದೆ.  ಭಾರತದಲ್ಲಿ ಒಂದು ಹೆಕ್ಟೇರ್ ಪ್ರದೇಶದಿಂದ 17 ರಿಂದ 22 ಕೆ.ಜಿ.ಗಳಷ್ಟು ಎಣ್ಣೆ ಪಡೆಯಲಾಗಿದೆ.  ಹೊಸ ಜಮೀನಿನಲ್ಲಿ ಚೆನ್ನಾಗಿ ಗೊಬ್ಬರ ಕೊಟ್ಟು ಬೇಸಾಯ ಮಾಡಿ ಬೆಳೆಸಿದರೆ ಒಂದು ಹೆಕ್ಟೇರಿನಿಂದ 33 ಕೆ.ಜಿ.ಗಳಷ್ಟು ಸುಮಾರು 1,000 ಕೆ.ಜಿ.  ಆದರೂ, ಉತ್ಪತ್ತಿಯಾಗುತ್ತಿರುವ ಜಿರೇನಿಯಮ್ ಎಣ್ಣೆ ಸಾಲದೆ ಇತರ ದೇಶಗಳಿಂದ ತರಿಸಿಕೊಳ್ಳಲಾಗುತ್ತಿದೆ.
ಪೆಲರ್ಗೋನೀಯಮ್ ಸಸ್ಯಕ್ಕೆ ಫ್ಯೂಸೇರಿಯಮ್ ಪಿತಿಯಮ್, ಮುಂತಾದ ಶಿಲೀಂಧ್ರ ರೋಗಗಳ ಅಪಾಯವುಂಟು.  ರೋಗಪೀಡಿತ ಗಿಡಗಳಿಗೆ 0.5% ಬೋರ್ಡೋ ದ್ರಾವಣವನ್ನು ಸಿಂಪಡಿಸುವುದರಿಂದ ರೋಗವನ್ನು ತಡೆಗಟ್ಟಬಹದು.  ಈ ಸಸ್ಯಕ್ಕೆ ಹೂ ತಿನ್ನುವ ಕಂಬಳಿಹುಳುಗಳೂ ಮುತ್ತುವುದಿದೆ.  30 ಮಿಲಿ ರೋಗರ್ ಅಥವಾ 9 ಮಿಲಿ ಡೆಮಿಕ್ರಾನ್ ಅಥವಾ 18 ಮಿಲಿ ಪ್ಯಾರಾಥಿಯಾನನ್ನು 18 ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಿ ಇವನ್ನು ಹೋಗಲಾಡಿಸಬಹುದು.		
(ಬಿ.ಸಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ